ವಿಷಯಕ್ಕೆ ಹೋಗು

ಚರಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚರಕದಿಂದ ನೂಲು ತೆಗೆಯುತ್ತಿರುವ ಮಹಿಳೆ

ಚರಕವು ಹತ್ತಿಯಿಂದ ನೂಲು ತಗೆಯುವ ಸಾಧನ. ಇದನ್ನು ರಾಟೆಯೆಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಒಂದು ಕೈಯಿಂದ ತಿರುಗಿಸುವುದು ವಾಡಿಕೆ.

ಬಹುಕಾಲದವರೆಗೆ ಮಾನವನ ನಾಗರಿಕತೆ ವ್ಯವಸಾಯ ಮತ್ತು ನೇಯ್ಗೆಗಳಿಗೆ ಸೀಮಿತವಾಗಿದ್ದಿತೆಂದು ನಾವು ಭಾವಿಸಬಹುದು. ನೆಯ್ಗೆಯಲ್ಲಿ ಮುಖ್ಯ ಭಾಗ ನೂಲು ; ನೂಲನ್ನು ಮಾಡಲು ಮನುಷ್ಯ ರಾಟೆಯನ್ನು ಕಂಡುಹಿಡಿದ. ಆಚೆ ಈಚೆ ಪಟ್ಟಿಯ ಮೆಲೆ ನಿಲ್ಲಿಸಿರುವ, ಎರಡು ಮರದ ತುಂಡುಗಳ ನಡುವೆ, ದುಂಡಗಿರುವ ಒಂದು ಮರದ ಚಕ್ರವನ್ನು ನಿಲ್ಲಿಸಿ ಅದಕ್ಕೆ ಒಂದು ದಾರವನ್ನು ಜೋಡಿಸಿ, ಅದನ್ನು ಕದರಿಗೆ ಲಗತ್ತಿಸಿ ಹಿಡಿಯನ್ನು ತಿರುಗಿಸುವುದರಿಂದ ಕದರಿನಲ್ಲಿ ನೂಲನ್ನು ತೆಗೆಯುವ ಸಾಧನವೇ ರಾಟೆ. ಅದರ ಅತಿಪ್ರಾಚೀನ ಮತ್ತು ಪ್ರಥಮ ಅವತಾರವನ್ನು ಇಂದಿನ ಗಾಡಿ ಚಕ್ರಕ್ಕೆ ಹೋಲಿಸಬಹುದು. ಹತ್ತಿಯಿಂದ ಹಿಂಜಿ ಮಾಡಿ ಅದರಿಂದ ರಾಟೆಯನ್ನು ನೂಲನ್ನು ನೂತು ಅತಿಪ್ರಾಚೀನ ಕಾಲದಿಂದಲೂ ವಸ್ತ್ರಗಳನ್ನು ತಯಾರಿಸುತ್ತಿದ್ದರು. ರಾಟೆಯಲ್ಲಿ ನೂಲುವುದು ಗೃಹಿಣಿಯ ಅನಿವಾರ್ಯ ಕೆಲಸವಾಗಿತ್ತು. ಮಹಿಳೆಯರು ಅದನ್ನು ಒಂದು ದೊಡ್ಡ ಕುಶಲಕಲೆಯನ್ನಾಗಿ ಮಾಡಿಕೊಂಡು, ಧನಿಕರ ಮನೆಯಲ್ಲಿರಲಿ ಅರಮನೆಯಲ್ಲಿರಲಿ ರಾಟೆಯಲ್ಲಿ ನೂಲುವುದನ್ನು ಮಾತ್ರ ಬಿಡುತ್ತಿರಲಿಲ್ಲ. ತನ್ನ ವಸ್ತ್ರಕ್ಕಾಗಿ ರಾಟೆಯಲ್ಲಿ ನೂಲನ್ನು ನೂಲದವನ ಸ್ವಾವಲಂಬನೆ ಪೂರ್ಣವಾಗುತ್ತಿರಲಿಲ್ಲ. ಪ್ರತಿ ವ್ಯವಸಾಯಗಾರನೂ ಮನೆಯಲ್ಲಿ ರಾಟೆ ಇಟ್ಟುಕೊಂಡು, ಊಟಕ್ಕೆ ಕಾಳನ್ನು ಬೆಳೆಯುವಂತೆ, ಬಟ್ಟೆಗಾಗಿ ಹತ್ತಿಯನ್ನು ಬೆಳೆಯುತ್ತಿದ್ದ. ಅವನ ಹೆಂಡತಿ ನೂಲುತ್ತಿದ್ದಳು. ರಾಟೆಗೆ ಕುಂಟಾರು ಎಂಬ ಅಡ್ಡ ಹೆಸರೊಂದುಂಟು. ಎಂಟಾರು ಇದ್ದರೂ ಕುಂಟಾರು ಇರಬೇಕು ಎಂಬ ನಾಣ್ನುಡಿ ಇದೆ. ಕೋಟಿ ವಿದ್ಯೆಗಿಂತ ರಾಟೆ ವಿದ್ಯೆ ಮೇಲು ಎಂಬುದು ಸರ್ವಜ್ಞನ ಅಭಿಪ್ರಾಯ. ಭಾರತದಲ್ಲಿ ಮಾತ್ರವೇ ಅಲ್ಲ. ನೂಲುವುದು ನೇಯುವುದು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿಯೂ ಯಂತ್ರಯುಗ ಬರುವವರೆಗೆ-ಜನತೆಯ ಅನಿವಾರ್ಯ ಕೈಗಾರಿಕೆ, ಕಸಬು ಆಗಿತ್ತು.

ಪ್ರಾಚೀನ ಭಾರತದಲ್ಲಿ ರಾಟೆ ಮತ್ತು ಕೈಮಗ್ಗದ ಕುಶಲಕಲೆಗಳು ತುಂಬ ಉನ್ನತ ಸ್ಥಿತಿಗೇರಿದ್ದವು. ರಾಮಾಯಣ ಭಾರತಗಳ ಕಾಲದಿಂದಲೂ ಈ ದೇಶದ ಕುಶಲಕಲೆಗಾರರ ವಸ್ತ್ರರಚನಾನೈಪುಣ್ಯ ವೈವಿದ್ಯ ಸಮೃದ್ಧಕಲಾಸೃಷ್ಟಿ ಪ್ರಸಿದ್ಧವಾಗಿವೆ. ರಾಟೆಯಲ್ಲಿ ನೂಲುವ ಕಲೆಯಲ್ಲಿಯಂತೂ ಇಲ್ಲಿಯ ಗ್ರಾಮೀಣ ಮಹಿಳೆಯರು- ಈಚಿನ ಕಾಲದ ಯಂತ್ರಗಳಿಗೂ ಮೀರಿಸಿದ- ಸೂಕ್ಷ್ಮತೆಯನ್ನು ರೂಢಿಸಿಕೊಂಡಿದ್ದರು. ದೇಶದ ಎಲ್ಲ ಭಾಗಗಳಲ್ಲಿಯೂ ಇಂಥ ನೂಲುಕಾರರಿದ್ದರು. ಬಂಗಾಳದಲ್ಲಿ ಅವನ ನೂಲುಗಾರಿಕೆ ಅತ್ಯುತ್ತಮ ಮಟ್ಟಕ್ಕೆ ಏರಿ, ಆ ನೂಲಿನಿಂದ ಮಾಡಿದ ಬಟ್ಟೆಗೆ ಢಾಕಾ ಮಸ್ಲಿನ್ ಎಂದೇ ಹೆಸರಾಗಿತ್ತು. ಮೊಗಲ್ ಚಕ್ರವರ್ತಿಗಳೂ ಅಂದಿನ ಕಾಲದ ಇತರ ಎಲ್ಲ ರಾಜಮಹಾರಾಜರೂ ಆ ಬೆಲೆಬಾಳುವ ವಸ್ತ್ರಗಳನ್ನೇ ತೊಡುತ್ತಿದ್ದರು. ಅವು ಎಷ್ಟು ಸೂಕ್ಷ್ಮವೂ ತೆಳವೂ ಆಗಿದ್ದುವೆಂದರೆ ಇಡೀ ಒಂದು ವಸ್ತ್ರವನ್ನು ಒಂದು ಉಂಗುರದ ಒಳಗೆ ತೂರಿಸಬಹುದಾಗಿದ್ದಿತು. ಢಾಕಾ ಮಸ್ಲಿನ್ನಿನ ನವಿರನ್ನು ತೊರಿಸಲು ಔರಂಗಜೇಬನ ಮಗಳ ವಿಷಯದಲ್ಲಿ ಒಂದು ಕಥೆಯಿದೆ. ಒಂದು ಸಲ ಔರಂಗಜೇಬನ ಮಗಳನ್ನು ನೀನು ಮೈತುಂಬ ಗಂಭೀರವಾಗಿ ಉಡುಪು ಧರಿಸಿಲ್ಲ ಎಂದು ಗದರಿಸದನಂತೆ. ಆಕೆ 'ನಾನು ಏಳು ಢಾಕಾ ಮಸ್ಲಿನ್ ಸೀರೆಗಳನ್ನು ಒಂದರ ಮೇಲೆ ಒಂದನ್ನು ಧರಿಸಿದ್ದೇನೆ. ಆದರೂ ಮೈ ಬಣ್ಣ ಕಾಣುತ್ತಿದೆ- ಎಂದಳಂತೆ.

ಈಸ್ಟ್ ಇಂಡಿಯ ಕಂಪನಿಯವರು ಭಾರತಕ್ಕೆ ಬಂದ ಅನಂತರ, ಇತರ ಎಲ್ಲ ಗೃಹಕೈಗಾರಿಕೆಗಳಂತೆ ಭಾರತದ ಕೈನೂಲು ಕೈಮಗ್ಗದ ಕೈಗಾರಿಕೆಗಳು ಮೂಲೆಗೆ ಬಿದ್ದುವು. ಲ್ಯಾಂಕಷೈರಿನ ಬಟ್ಟೆ ಗಿರಣಿಗಳ ಉದ್ಧಾರಕ್ಕಾಗಿ, ಬ್ರಿಟಿಷರು ಭಾರತವನ್ನು ತಮ್ಮ ಬಟ್ಟೆಗಳಿಗೆ ಗಿರಾಕಿ ಮಾಡಿಕೊಂಡರು. ಭಾರತದ ನೂಲುವವರನ್ನೂ ನೆಯ್ಗೆಯವರನ್ನೂ ಅತ್ಯಂತ ಕ್ರೂರವಾದ ರೀತಿಯಲ್ಲಿ ನಿರುದ್ಯೋಗಕ್ಕೆ ಸಿಲುಕಿಸಿ ಕೆಲವು ವೇಳೆ ಹಿಂಸೆ ಸಹ ಮಾಡಿ ಆ ಕಸಬನ್ನೂ ಅದನ್ನು ನಡೆಸುವವರನ್ನೂ ನಾಶಮಾಡಿಬಿಟ್ಟರು. ಇಂಗ್ಲೆಂಡಿನ ಬಟ್ಟೆಗಳು ಭಾರತದಲ್ಲಿ ಬಂದು ವಿಜೃಂಭಿಸತೊಡಗಿದುವು. ಭಾರತಕ್ಕೆ ಇಂಗ್ಲೆಂಡು, ವರ್ಷಕ್ಕೆ ಅರವತ್ತು ಕೋಟಿ ರೂಪಾಯಿಗಳ ಬಟ್ಟೆಗಳನ್ನು ಕಳುಹಿಸುತ್ತಿತ್ತು. ರಾಟೆ ದೇಶದಿಂದ ಕಣ್ಮರೆಯಾಯಿತು. ಮತ್ತದು ಬೆಳಕಿಗೆ ಬರುಲು ಗಾಂಧಿಯವರ ಅವತಾರವಾಗಬೇಕಾಯಿತು.

ಮಹಾತ್ಮ ಗಾಂಧೀಜಿ ಆಫ್ರಿಕದಲ್ಲಿ ತಮ್ಮ ಸತ್ಯಾಗರಹದ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾಗ, ಭಾರತೀಯರ ಅಸ್ವಾತಂತ್ರ್ಯಕ್ಕೂ ಆಫ್ರಿಕದಲ್ಲಿ ಭಾರತೀಯರ ಕಷ್ಟಗಳಿಗೂ ಆಧುನಿಕ ಯಂತ್ರನಾಗರಿಕತೆಯೇ ಮುಖ್ಯ ಕಾರಣವೆಂಬುದನ್ನು ತಿಳಿದರು ; ಪ್ರತಿಯೊಂದು ವಿಷಯದಲ್ಲಿಯೂ ಸ್ವಾವಲಂಬನೆ, ಸ್ವದೇಶಿ-ಇವು ಸ್ವಾತಂತ್ರ್ಯ ಹೋರಾಟಕ್ಕೆ ಅವಶ್ಯಕವೆಂದು ನಿರ್ಧರಿಸಿದರು. ಮುಖ್ಯವಾಗಿ ಆಹಾರ ಮತ್ತು ವಸ್ತ್ರಗಳ ವಿಷಯದಲ್ಲಿ ಸ್ವಾವಲಂಬನೆಗಾಗಿ ಪ್ರಯತ್ನಿಸತೊಡಗಿದರು. ರಾಟೆ ಎಂಬ ಉಪಕರಣವಿದೆಯೆಂದು ಅವರು ಕೇಳಿದ್ದುದಲ್ಲದೆ ಅದರ ವಿಷಯದಲ್ಲಿ ಹಿಂದೆ ಸ್ವರಾಜ್ಯದಲ್ಲಿ ಅದರ ಬಗ್ಗೆ 1905ರಲ್ಲಿಯೇ ಬರೆದಿದ್ದರು. ಆದರೆ ಅವರು 1915ರವರೆಗೆ ರಾಟೆಯನ್ನು ನೋಡಿರಲಿಲ್ಲ. ಆಫ್ರಿಕದಿಂದ ಭಾರತಕ್ಕೆ ಹಿಂದಿರುಗಿದ ಅನಂತರದ ಅವರ ಸ್ವದೇಶಿ ವೃತ್ತಕ್ಕೆ ಅನುಗುಣವಾಗಿ, ಕೈಮಗ್ಗದ ಬಟ್ಟೆಯನ್ನು ಧರಿಸುತ್ತಿದ್ದರು. ಆದರೆ ಅದಕ್ಕೆ ಬೇಕಾಗುವ ನೂಲು ಗಿರಣಿಗಳಲ್ಲಿ ತಯಾರಾಗುತ್ತಿತ್ತು. ಗಿರಣಿಗಳ ಮೇಲಿನ ಅವಲಂಬನೆಯನ್ನು ಬಿಡಬೇಕಾದರೆ ಅವರು ನೂಲುವ ರಾಟೆಯನ್ನು ಕಂಡುಹಿಡಿದು ಅದರಲ್ಲಿ ನೂಲು ಗಿರಣಿಗಳಲ್ಲಿ ತಯಾರಾಗುತ್ತಿತ್ತು. ಗಿರಣಿಗಳ ಮೇಲಿನ ಅವಲಂಬನೆಯನ್ನು ಬಿಡಬೇಕಾದರೆ ಅವರು ನೂಲುವ ರಾಟೆಯನ್ನು ಕಂಡುಹಿಡಿದು ಅದರಲ್ಲಿ ನೂಲು ತೆಗೆಯಬೇಕಾಗಿತ್ತು ; ಗಾಂಧೀಜಿ ಎರಡು ವರ್ಷಗಳ ಕಾಲ ದೇಶದಲ್ಲೆಲ್ಲ ರಾಟೆಗಾಗಿ ವಿಚಾರಿಸಿ, ಕೊನೆಗೆ ಬ್ರೋಚ್‍ನಲ್ಲಿ, ಗಂಗಾಬಹನ್ ಎಂಬುವರ ಮೂಲಕ ರಾಟೆಯನ್ನೂ ನೂಲುವವರನ್ನೂ ಪತ್ತೆ ಹಚ್ಚಿದರು. ರಾಟೆಯನ್ನು ಅವರು ಚರಕ ಎಂದು ಕರೆದರು. ಅನಂತರ ಚರಕ ಸ್ವದೇಶಿ, ಸ್ವರಾಜ್ಯಗಳ ಸಂಕೇತವಾಯಿತು.

ಗಾಂಧೀಜಿಯವರ ದೃಷ್ಟಿಯಲ್ಲಿ ಚರಕ, ಖಾದೀ-ಇವು ಭಾರತದ ಆರ್ಥಿಕ ಮತ್ತು ಅಧ್ಯಾತ್ಮ ಜೀವನದ ಪುನಶ್ಚೇತನಕ್ಕೆ ಸಹಾಯಕವಾದ, ಉಪಕರಣಗಳು. ಅದೊಂದು ಬರಿಯ ಬಟ್ಟೆಯ ಪ್ರಶ್ನೆ ಮಾತ್ರವಲ್ಲ, ಖಾದೀ ಎಂಬುದು ಒಂದು ಜೀವನಕ್ರಮ. (ರಾಟೆ ಅಥವಾ ಚರಕದಲ್ಲಿ ಕೈಯಲ್ಲಿ ನೂತ ದಾರದಿಂದ ಕೈಮಗ್ಗದಲ್ಲಿ ನೆಯ್ದ ಬಟ್ಟೆಗೆ ಖಾದೀ ಅಥವಾ ಖದ್ದರ್ ಎಂದು ಹೆಸರು.) ಇದು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಒಂದು ಆಯುಧವೂ ಆಯಿತು. ಖಾದೀ ಸ್ವರಾಜ್ಯ ಚಳವಳಿಯ ದೊಡ್ಡ ಅಸ್ತ್ರವಾಯಿತು. ಬ್ರಿಟಿಷರು ಖಾದಿ ಧರಿಸುವುದನ್ನೂ ಒಂದು ರಾಜಕೀಯ ಅಪರಾಧ ಎಂಬ ದೃಷ್ಟಿಯಿಂದ ನೋಡುತ್ತಿದ್ದರು. ಗಾಂಧೀಜಿಯ ಮೇಲೆ, ಬ್ರಿಟಿಷ್ ಸರ್ಕಾರ ರಾಜದ್ರೋಹದ ಆಪಾದನೆಯನ್ನು ಹೊರಿಸಿ ಮೊಕದ್ದಮೆ ಹೂಡಿ ತಮ್ಮ ಕಸುಬು ಯಾವುದು ಎಂದು ಕೇಳಿದಾಗ ಅವರು ವ್ಯವಸಾಯ ಮತ್ತು ನೆಯ್ಗೆ ಎಂದು ಪ್ರತ್ಯುತರ್ತವಿತ್ತರು. ಗಾಂಧೀಜಿ ಮತ್ತು ಕಾಂಗ್ರೆಸ್ಸಿನವರು ದೇಶದಲ್ಲೆಲ್ಲ ಚರಕವನ್ನೂ ಖಾದಿಯನ್ನೂ ಪ್ರಚಾರ ಮಾಡಿ, ಅದರ ವ್ಯವಸ್ಥೆಗಾಗಿ ಅಖಿಲ ಭಾರತ ಚರಕ ಸಂಘ ಎಂಬುದನ್ನು ಸ್ಥಾಪಿಸಿದರು. ಪಂಡಿತ್ ಜವಹರ್‍ಲಾಲ್ ನೆಹರು ಖಾದೀ ಸ್ವಾತಂತ್ರ್ಯದ ಸಮವಸ್ತ್ರ ಎಂದು ಹೇಳಿದರು. ಭಾರತದ ರಾಷ್ಟ್ರಧ್ವಜದಲ್ಲಿ ಚರಕದ ಸಂಕೇತವನ್ನು ಸೇರಿಸಲಾಯಿತು, ಸ್ವಾತಂತ್ರ್ಯಾನಂತರ ಅದು ಚಕ್ರರೂಪದಲ್ಲಿ ಉಳಿದು ಬಂದಿದೆ.

ಚರಕ ಎಂಬುದು ಬಹಳ ಸುಲಭವಾದ ಉಪಕರಣ. ಹಿಂದಲ ಕಾಲದ ಚರಕ ದೊಡ್ಡದಾದ ಒಂದು ಚಕ್ರವಾಗಿತ್ತು. ಈಚೆಗೆ ಗಾಂಧೀಜಿ ಹೊಸದಾಗಿ ಬಳಕೆಗೆ ತಂದ ಮೇಲೆ, ಅದನ್ನು ಸಾಬರಮತಿ ಚರಕ ಎಂದು ಕರೆದರು. ಅನಂತರ ಅದರ ಮತ್ತೊಂದು ರೂಪವೇ ಸೇವಾಗ್ರಾಮ ಚರಕವೆಂದಾಯಿತು. ಎರಡು ಚಕ್ರಗಳ ಪೆಟ್ಟಿಗೆ ಚರಕಕ್ಕೆ ಯರವಾಡಿ ಚರಕ ಎಂದು ಹೆಸರಾಯಿತು. ಮೈಸೂರಿನಲ್ಲಿ ಮಾರಿಸ್ ಫ್ರೆಡ್‍ಮನ್ ಎಂಬುವರು ಚರಕದಲ್ಲಿ ಕೆಲವು ಹೊಸ ಸೌಲಭ್ಯಗಳನ್ನು ಕಲ್ಪಿಸಿದರು. ಒಂದು ಸಲ ಅಖಿಲ ಭಾರತ ಚರಕ ಸಂಘದವರು ಅತ್ಯುತ್ತಮ ಚರಕವನ್ನು ಕಂಡುಹಿಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಪ್ರಕಟಿಸಿದರು. ಆ ಪೈಪೋಟಿಗಾಗಿ ತಯಾರಾದ ಚರಕಲ್ಲಿ ಸುದರ್ಶನ ಚರಕವೆಂಬುದು ಬಳಕೆಗೆ ಬಂತು. ಈಚೆಗೆ ಅಂಬರ್ ಎಂಬ ಮತ್ತೊಂದು ಚರಕ ಪ್ರಚಾರದಲ್ಲಿದೆ. ಈಚಿನ ಸುಧಾರಣೆಯಿಂದಾಗಿ ಒಂದಿದ್ದ ಕದರು ಒಂಬತ್ತು ಆಯಿತು. ಈಗ ಮೂವತ್ತಾರು ಕದರನ್ನು ಉಪಯೋಗಿಸಿ ಅದಕ್ಕೆ ಬೇಕಾದರೆ ವಿದ್ಯುಚ್ಛಕ್ತಿಯನ್ನೂ ಲಗತ್ತಿಸುವ ಸೌಕರ್ಯವನ್ನು ಏರ್ಪಡಿಸುತ್ತಿದ್ದಾರೆ.

ಹೀಗೆ ಭಾರತದ ಪ್ರಾಚೀನ ಕುಶಲಕೆಯಾಗಿದ್ದು, ಅನಂತರ ಕಣ್ಮರೆಯಾಗಿ ಮತ್ತೆ ಗಾಂಧೀಜಿಯ ಪ್ರಯತ್ನದಿಂದ ಪುನರುಜ್ಜೀವನಗೊಂಡು, ಸ್ವಾತಂತ್ರ್ಯ ಸಂಗ್ರಾಮದ ಮುಖ್ಯ ಅಸ್ತ್ರವಾಗಿ ವಿಜೃಂಭಿಸಿದ ಚರಕ ಈಗ ಜನತೆಯ ನಿರುದ್ಯೋಗವನ್ನು ಪರಿಹರಿಸುವ ದಿಕ್ಕಿನಲ್ಲಿ ಹೆಜ್ಜೆಯಿಡುತ್ತಿದೆ. ಸರಿಯಾದ ವ್ಯವಸ್ಥೆಯಿಂದ ಇದು ಗ್ರಾಮಾಂತರ ಜನತೆಯ ಪಾಲಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸುವ ಕಾಮಧೇನುವಾಗಬಲ್ಲುದು.

ಥ್ರೆಡ್ ಮತ್ತು ಬಟ್ಟೆಯನ್ನು ನೇಯ್ಗೆ ಮಾಡಲು ಗ್ರಾಮೀಣ ಪ್ರದೇಶಗಳಲ್ಲಿ ಹ್ಯಾಂಡ್ ಲೂಮ್ ಅನ್ನು ಇನ್ನೂ ಬಳಸಲಾಗುತ್ತದೆ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚರಕ&oldid=1144132" ಇಂದ ಪಡೆಯಲ್ಪಟ್ಟಿದೆ