ವಿಷಯಕ್ಕೆ ಹೋಗು

ಪ್ರೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಳದಿ ಪ್ರೇರಿ, ಬ್ಯಾಡ್‍ಲ್ಯಾಂಡ್ಸ್ ರಾಷ್ಟ್ರೀಯ ಉದ್ಯಾನ, ಸೌತ್ ಡಕೋಟಾ, ಅಮೇರಿಕ

ಪ್ರೇರಿ ಉತ್ತರ ಅಮೆರಿಕದ ಸಮತಲವಾದ ಹಾಗೂ ಏರಿಳಿಯುವ ನೆಲದ ಹುಲ್ಲುಗಾಡು. ಕೆನಡ ದೇಶದ ಅಲ್ಬರ್ಟ್ ಪ್ರಾಂತ್ಯದಿಂದ ದಕ್ಷಿಣಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನ ಟೆಕ್ಸಾಸ್ ರಾಜ್ಯದವರೆಗೆ, ಪಶ್ಚಿಮದ ಬೆಂಗಾಡಿನಿಂದ ಪೂರ್ವದ ಆರ್ದ್ರ ಅರಣ್ಯಗಳವರೆಗೆ ಹಬ್ಬಿದೆ. ಪೂರ್ವ ತುದಿಯ ಅರಣ್ಯಗಳ ಅಂಚಿನ, 100ಸೆಂಮೀ.ಗಿಂತ ಕಡಿಮೆ ಮಳೆಯಾಗುವ ಪ್ರದೇಶದಿಂದ ಪಶ್ಚಿಮ ತುದಿಯ, 30 ಸೆಂಮೀ. ಗಿಂತ ಕಡಿಮೆ ಮಳೆಯಾಗುವ ಬೆಂಗಾಡು ಹಾಗೂ ಮರಳುಗಾಡಿನವರೆಗೆ ಮಳೆ ಕಡಿಮೆಯಾಗುತ್ತ ಹೋಗುವ ಪ್ರದೇಶದಲ್ಲಿ ಹುಲ್ಲು ಯಥೇಚ್ಛವಾಗಿ ಬೆಳೆದಿದೆ.

ವಿವರಗಳು

[ಬದಲಾಯಿಸಿ]

ಲಂಬ, ಮಧ್ಯಮ ಹಾಗೂ ಗಿಡ್ಡು ಎಂದು ಮೂರು ಬಗೆಯಾಗಿ ಇಲ್ಲಿಯ ಹುಲ್ಲುಗಳನ್ನು ವಿಂಗಡಿಸಲಾಗಿದೆ. ಸಮುದ್ರದಂಚಿನ ಪ್ರೇರಿ, ಪೆಸಿಫಿಕ್ ಅಥವಾ ಕ್ಯಾಲಿಫೋರ್ನಿಯ ಪ್ರೇರಿ, ಪ್ಯಾಲಾಸ್ ಪ್ರೇರಿ ಹಾಗೂ ಬೆಂಗಾಡಿನ ಪ್ರೇರಿ-ಹೀಗೆ ಹುಲ್ಲುಗಾಡುಗಳನ್ನು ಪ್ರಾದೇಶಿಕವಾಗಿಯೂ ವಿಂಗಡಿಸಲಾಗಿದೆ. ರಷ್ಯದ ಸ್ಟೆಪ್ ದಕ್ಷಿಣ ಆಫ್ರಿಕದ ವೆಲ್ಡ್ ಹಾಗೂ ದಕ್ಷಿಣ ಅಮೆರಿಕದ ಪಾಂಪಾಸ್ ಹುಲ್ಲುಗಾಡುಗಳು ಉತ್ತರ ಅಮೆರಿಕದ ಪ್ರೇರಿಯ ಲಕ್ಷಣಗಳನ್ನೇ ಹೊಂದಿವೆ. ಪ್ರೇರಿಯಲ್ಲಿ ನಡುನಡುವೆ ಮರಗಳಿಲ್ಲ; ಇದ್ದರೂ ಎಲ್ಲೋ ಅಲ್ಲಲ್ಲಿ ಮಾತ್ರ.

ಲಂಬವಾದ ಹುಲ್ಲು ಹೆಚ್ಚು ಮಳೆ ಬೀಳುವ, ಪರ್ಣಪಾತಿ ಅರಣ್ಯಗಳ ಅಂಚಿನಲ್ಲಿ ಅಧಿಕವಾಗಿದೆ. ಉತ್ತರ ಅಮೆರಿಕದ ಪೂರ್ವಭಾಗದಿಂದ ಪ.ರೇ.1000 ಯವರೆಗಿನ ಪ್ರೇರಿ ಪ್ರದೇಶದಲ್ಲಿ ಹುಲ್ಲು ಮೀ. ಎತ್ತರಕ್ಕೆ ಬೆಳೆಯುತ್ತದೆ. ಅಲ್ಲಿಂದ ಪಶ್ಚಿಮಕ್ಕೆ ಗುಚ್ಛಗಳಲ್ಲಿ ಹಾಗೂ ಹರಡಿ ಬೆಳೆದ ಎತ್ತರದ ಹುಲ್ಲು ಇರುತ್ತದೆ. ಇದು ಸುಮಾರು 1.2ಮೀ. ಎತ್ತರಕ್ಕಿರುತ್ತದೆ. ಪಶ್ಚಿಮದ ರಾಕೀ ಪರ್ವತಗಳ ಕಡೆಯ ಮೇಲ್ನಾಡಿನ ಹುಲ್ಲು ಗಿಡ್ಡಗಿರುತ್ತದೆ, ಕೇಲವೇ ಸೆಂ.ಮೀ. ಎತ್ತರವಾಗಿರುತ್ತದೆ. ಬೇಸಗೆಯಧಗೆ, ಬೀಸುಗಾಳಿ, ಬೇಸಗೆಯ ಉತ್ತರಾರ್ಧದಲ್ಲಿ ಜಲಕ್ಷಾಮ, ಒಣಗಿದ ಸಸ್ಯಗಳು ಇವುಗಳಿಂದ ಇಲ್ಲಿ ಸಹಜವಾಗಿಯೆ ಆಗಾಗ್ಗೆ ಕಾಳ್ಗಿಚ್ಚು ಸಂಭವಿಸುತ್ತಿರುತ್ತದೆ.

ಎಲ್ಲ ಋತುಗಳಲ್ಲೂ ಹುಲ್ಲು ಯಥೇಚ್ಛವಾಗಿರುವುದು ಪ್ರೇರಿ ಹುಲ್ಲುಗಾಡಿನ ವೈಶಿಷ್ಟ್ಯ. ವಸಂತ ಹಾಗೂ ಶರತ್ಕಾಲಗಳಲ್ಲಿ ಬಣ್ಣಬಣ್ಣದ ಹೂ ಬಿಡುವ ಸಸ್ಯಗಳಿರುತ್ತವೆ. ಹಿಂದೆ ಈ ಹುಲ್ಲುಗಾಡುಗಳಲ್ಲಿ ಕಾಡುಕೋಣಗಳ, ಕವಲು ಕೊಂಬಿನ ಜಿಂಕೆಗಳ ಮಂದೆಗಳಿದ್ದುವು. ಉತ್ತರ ಅಮೆರಿಕದ ಪರಿಶೋಧನೆಯ ಕಾಲದಲ್ಲಿ ಹಾಗೂ ಇಲ್ಲಿ ಯೂರೋಪಿನ ಜನರು ನೆಲೆಸಿದಾಗ ಇವು ಬಹುತೇಕ ನಾಶವಾದುವು. ಕೀವೋಟೊ (ಹುಲ್ಲುಗಾಡಿನ ತೋಳ), ಜಾಕ್ ರ್‍ಯಾಬಿಟ್, ಬ್ಯಾಡ್ಜರ್, ಪ್ರೇರಿ ನಾಯಿ, ಪ್ರೇರಿ ಕೋಳಿ, ಬಯಲು ಬಾನಾಡಿ, ಕಿರೀಟದ ಬಾನಾಡಿ, ವಿವಿಧ ಬಗೆಯ ಡೇಗೆಗಳು, ಚಿಟ್ಟೆ ಹಾಗೂ ನೊಣಗಳು ಇಲ್ಲವೆ.

ಪ್ರೇರಿಯ ನೆಲ ಫಲವತ್ತಾಗಿದ್ದು, ಧಾನ್ಯದ ಬೆಳೆಗೆ ಅನುಕೂಲವಾದ ವಾಯುಗುಣ ಇಲ್ಲಿರುವುದರಿಂದ ವಲಸೆಗಾರರು ಹುಲ್ಲುಗಾಡುಗಳನ್ನು ಸವರಿ ಭೂಮಿಯನ್ನು ಸಾಗುವಳಿಗೆ ತಂದರು. ಈಗ ಪ್ರೇರಿ ನೆಲದಲ್ಲಿ ವ್ಯವಸಾಯ ವ್ಯಾಪಕವಾಗಿದೆ. ಇಲ್ಲಿಯ ಪ್ರಧಾನ ಬೆಳೆಗಳು, ಪೂರ್ವ ಭಾಗದಲ್ಲಿ ಮೆಕ್ಕೆಜೋಳ ಮತ್ತು ಮಧ್ಯ ಅಮೆರಿಕದಲ್ಲಿ ಗೋಧಿ. ಉಳಿದ ಕೆಲವು ಕಡೆಗಳಲ್ಲಿ ಪ್ರೇರಿ ಹುಲ್ಲುಗಾಡನ್ನು ರಕ್ಷಿಸಲಾಗಿದೆ.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪ್ರೇರಿ&oldid=1007017" ಇಂದ ಪಡೆಯಲ್ಪಟ್ಟಿದೆ